ಇನೋನು, ಇಸ್ಮತ್
	1884-. ಆಧುನಿಕ ತುರ್ಕಿದೇಶದ ಮೊದಲ ಪ್ರಧಾನಿ ಹಾಗೂ ಎರಡನೆಯ ರಾಷ್ಟ್ರಾಧ್ಯಕ್ಷ. ಇಜ್ಮಿರ್ (ಸ್ಮರ್ನ) ಪ್ರಾಂತ್ಯದ ತುರ್ಕಿವಂಶದಲ್ಲಿ ಜನಿಸಿದ. ಇಜ್ಮಿರ್‍ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಅನಂತರ ಸೈನಿಕ ಶಿಕ್ಷಣಶಾಲೆಯಲ್ಲಿ ವಿದ್ಯಾರ್ಜನೆ ಮಾಡಿ ಪದವೀಧರನಾದ. 1902ರಲ್ಲಿ ಮದ್ದುಗುಂಡಿನ ಇಲಾಖೆಯಲ್ಲಿ ಜಮಾದಾರ್ ಆದ. 1908ರಲ್ಲಿ ತುರ್ಕಿಯ ರಾಜ್ಯಭಾರತದಲ್ಲಿ ಅಸಮಾಧಾನಗೊಂಡಿದ್ದ ಅನೇಕ ತುರ್ಕಿ ತರುಣರು ದಂಗೆಯೆದ್ದು ಹೊಸ ರಾಜಕೀಯ ವ್ಯವಸ್ಥೆ ಮಾಡಿದರು. ಅದಾದ ಮೇಲೆ ಅನೇಕ ಸಲ ಈತ ಸೈನಿಕ ಕಾರ್ಯಾರ್ಥಿಯಾಗಿ ಯೆಮೆನ್‍ಗೆ ಹೋದ. ತುರ್ಕಿ ನಡೆಸಿದ ಯುದ್ಧಗಳಲ್ಲೆಲ್ಲ ಕೆಮಾಲ್ ಪಾಷಾನೊಂದಿಗೆ ಭಾಗವಹಿಸುತ್ತಿದ್ದ. ಮೊದಲನೆಯ ಮಹಾಯುದ್ಧಕಾಲದಲ್ಲಿ ಸಿರಿಯದಲ್ಲಿ ಸೇವೆಯನ್ನು ಸಲ್ಲಿಸಿದ. ಆದರೆ 1918ರಲ್ಲಿ ತುರ್ಕಿ ಶತ್ರುಗಳ ಪಾಲಾಯಿತು. ಏಷ್ಯದ ತುರ್ಕಿಯಲ್ಲಿದ್ದ ಸ್ಮರ್ನ ಪ್ರಾಂತ್ಯವನ್ನು ಜಾತಿಶತ್ರುಗಳಾದ ಗ್ರೀಕರಿಗೆ ಕೊಟ್ಟರು. ಕೆಮಾಲ್ ಶತ್ರುಗಳನ್ನು ಸ್ವದೇಶದಿಂದ ಅಟ್ಟುವುದಕ್ಕಾಗಿ ದೇಶಪ್ರೇಮಿಗಳನ್ನೆಲ್ಲ ಒಟ್ಟುಗೂಡಿಸಿ ಏಷ್ಯದ ತುರ್ಕಿಯಲ್ಲಿರುವ ಅಂಕಾರ ಪಟ್ಟಣದಲ್ಲಿ ಹೊಸದಾದ ತುರ್ಕಿರಾಜ್ಯವೊಂದನ್ನು ಸ್ಥಾಪಿಸಿದ. ಅಂಕಾರದಲ್ಲಿ ಒಟ್ಟುಗೂಡಿದ ಪ್ರತಿನಿಧಿಗಳು ಕೆಮಾಲನನ್ನು ಅಧ್ಯಕ್ಷನನ್ನಾಗಿಯೂ ಇನೋನುವನ್ನು ಸೈನ್ಯಾಧಿಪತಿಯನ್ನಾಗಿಯೂ ಚುನಾಯಿಸಿದರು. ಇನೋನು ಕೆಮಾಲನೊಡನೆ ಗ್ರೀಕರ ಮೇಲೆ ಯುದ್ಧಮಾಡಿ ಅವರ ಸೈನ್ಯವನ್ನು ನಿರ್ಮೂಲಮಾಡಿ ತುರ್ಕಿಯನ್ನು ವಿಪತ್ತಿನಿಂದ ಪಾರುಮಾಡಿದ. ಇನೋನು ಗ್ರಾಮದಲ್ಲಿ ಗ್ರೀಕರನ್ನು ಎರಡುಬಾರಿ ಹಿಮ್ಮೆಟ್ಟಿಸಿ ಅಂದಿನಿಂದ ಇನೋನು ಇಸ್ಮತ್ ಎಂದು ಪ್ರಖ್ಯಾತನಾದ. ಅನಂತರ ವಿದೇಶಾಂಗ ಮಂತ್ರಿಯಾಗಿ, ಲಾಸಾನ್ ಎಂಬಲ್ಲಿ ಯೂರೋಪಿನ ರಾಜ್ಯಗಳೊಂದಿಗೆ ಹೊಸ ಕೌಲೊಂದನ್ನು ಮಾಡಿಕೊಂಡ. 1923ರಲ್ಲಿ ತುರ್ಕಿಯಲ್ಲಿ ಪ್ರಜಾಪ್ರಭುತ್ವ ಏರ್ಪಟ್ಟಿತು. ಇನೋನು ಪ್ರಧಾನಮಂತ್ರಿಯಾಗಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ರಾಜಕೀಯದಲ್ಲಿ ಮತಾಧಿಕಾರಿಗಳಿಗೆ ಯಾವ ಪ್ರಾಬಲ್ಯವೂ ಇರಕೂಡದೆಂಬ ತತ್ತ್ವಾನುಸಾರ ಕಲೀಫನನ್ನೇ ತೆಗೆದು ಹಾಕಿದ. ಧರ್ಮಬೋಧೆಯ ಪಾಠಶಾಲೆಗಳನ್ನು ಮುಚ್ಚಿದ. ದೇಶದ ರಕ್ಷಣೆಗಾಗಿ ಹೊಸಬಗೆಯ ಸೈನ್ಯವನ್ನು ಸೃಷ್ಟಿಮಾಡಿದ. ಕೆಮಾಲನ ಮರಣಾನಂತರ ಇನೋನು ತುರ್ಕಿಯ ರಾಷ್ಟ್ರಪತಿಯಾಗಿ ಚುನಾಯಿತನಾದ. 1943ರಲ್ಲಿ ಪಾರ್ಲಿಮೆಂಟ್ ಪುನಃ ಇನೋನುವನ್ನು ರಾಷ್ಟ್ರಪತಿಯಾಗಿ ಆರಿಸಿತು. 1950ರವರೆಗೂ ರಾಷ್ಟ್ರಪತಿಯಾಗಿದ್ದ. ಇನೋನು ದೇಶಕ್ಕಾಗಿ ಮಾಡಿದ ಸ್ವಾರ್ಥತ್ಯಾಗವೂ ಸೇನಾನಾಯಕತ್ವವೂ ತುರ್ಕಿಯನ್ನು ಅನೇಕ ವಿಪತ್ತುಗಳಿಂದ ಪಾರುಮಾಡಿದವು.

(ಎಸ್.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ